ಆಹಾ!ಬರಲಿದೆ ಕೆಂಡಸಂಪಿಗೆ
Monday December 31, 2007
ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ’ ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು
ನಾಳೆಯಿಂದ ಒಂದು ಹೊಸ ಹೂವಿನ ಹೆಸರು
Monday December 31, 2007
ಪ್ರಿಯರೇ,
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ ಒಂದು ತುಣುಕು ನಾಳೆಯಿಂದ ನಿಮ್ಮ ಕಣ್ಣಿಗೆ ಕಾಣಿಸಲಿದೆ.
ದೊಡ್ಡ ಯೋಚನೆಯೊಂದರ ಕಾಲುದಾರಿ.
ಎತ್ತರದ ಹೂವೊಂದರ ಸಣ್ಣ ಪರಿಮಳ
ಒಂದು ಪುಟ್ಟ ಹೆಜ್ಜೆ
ಇಂದು ನಡುರಾತ್ರಿಗೆ ಮೊದಲೇ ಆ ಹೂವಿನ ಹೆಸರಿನ ವಿಳಾಸ ತಿಳಿಸುತ್ತೇನೆ.
ನಡುರಾತ್ರಿಯ ನಂತರ ನೀವು ಆ ಹೂವನ್ನ ಕಾಣುವಿರಿ.
ಕಳೆಯುತ್ತಿರುವ ವರ್ಷದ ಕಡೆಯ ಗಳಿಗೆಗಳು..
ಹೊಸ ವರ್ಷದ ಹೊಸ ನಿಮಿಷಗಳು..
ಕಾಯುತ್ತೀರಾ?
-ಅಬ್ದುಲ್ ರಶೀದ್.
ನುಡಿಜಯಂತಿ ಮೋಜಿನಲ್ಲಿ ಮೌನವಾದ ಚಪ್ಪರ
Friday December 28, 2007
ಇಂದು ತೀರ್ಥಹಳ್ಳಿಯಲ್ಲಿ ತೀರಿಹೋದ ಚಿ.ಶ್ರೀನಿವಾಸರಾಜು ಮೇಷ್ಟರ ಅಂತ್ಯಕ್ರಿಯೆ ಇರುವುದಿಲ್ಲ.ಏಕೆಂದರೆ ಅವರು ತಮ್ಮ ಶರೀರವನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಎಂದಿಗೂ ತನಗಾಗಿ ಬದುಕದ ಜೀವ ಶರೀರವನ್ನೂ ಕ್ರಿಯೆಗಳಿಗೆ ಬಿಟ್ಟುಕೊಡಲಿಲ್ಲ.
ಮೇಷ್ಟರ ನೆನಪಿಗೆ ಅವರೇ ಬರೆದು ರುಜು ಮಾಡಿದ ಈ ಕವಿತೆ.

ತೀರ್ಥಹಳ್ಳಿಯಲ್ಲಿ ತೀರಿ ಹೋದ ಚಿ.ಶ್ರೀನಿವಾಸರಾಜು ಮೇಷ್ಟರು
Friday December 28, 2007
ಸರಳ, ಸಜ್ಜನ, ಮಗುವಿನ ಪ್ರೀತಿಯ ರಾಜು ಮೇಷ್ಟರಿಗೆ ಕವಿತೆ ಓದುವ ಬರೆಯುವ ಎಲ್ಲರ ಪರವಾಗಿ ಇದೊಂದು ಹಳೆಯ ಕವಿತೆ
ಶ್ರೀನಿವಾಸ ರಾಜು ಮೇಷ್ಟರಿಗೆ ನಮಸ್ಕಾರ
ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ.
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ.
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ.
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,ವಿಟನಂತಹ ಬೇಜವಾಬ್ಧಾರಿಯ ಗಂಡಸು,
ಹಾಗೆಲ್ಲಾಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದುಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ.
‘ಸುಮ್ಮನೇ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈ ತುತ್ತಿನಂತಹವಾತ್ಸಲ್ಯ ಉಂಡು ಯಾಕೆ ಬೆನ್ನು ತಡವಿಸಿಕೊಂಡು ಬರಲಾಗುತ್ತಿಲ್ಲ’
ಮೇಷ್ಟರು ನಮ್ಮನ್ನು ಬೈಯ್ಯಬಹುದಿತ್ತು,ಕಿಚಾಯಿಸಬಹುದಿತ್ತು,ವಿಮರ್ಶಿಸಬಹುದಿತ್ತು
- ಹಾಗೇನೂ ಮಾಡಲಿಲ್ಲ.
ಸುಮ್ಮನೇ ಸದ್ದು ಮಾಡದೇ ಸಪಾಟು ದಾರಿಯಲ್ಲಿ ನಡೆವಂತೆ ನಡೆದು
ಟೀ ಲೋಟ ಕೈಯಲ್ಲಿರುವಂತೆೆ ನಡೆದು
ಕವಿತೆ ಎದೆಯೊಳಗಿರುವಂತೆ ನಡೆದು
ಎಲ್ಲಿ ಹೆಜ್ಜೆ ಊರುವುದೋ ಎಂಬಂತೆ ನಡೆದುಪುಸ್ತಕಗಳ ಪ್ರಕಾಶಿಸಿದರು
ನನ್ನಂತಹ ಅರಿವುಗೆಟ್ಟವನ ಕವಿಯನ್ನಾಗಿಸಿದರು
ಒಮ್ಮೆ ಮೇಷ್ಟರಿಗೆ ನಮಸ್ಕಾರ ಮಾಡಲು ಮರೆತು ನನಗೆ ನನ್ನನ್ನೇ ಒದೆಯಬೇಕೆನ್ನಿಸಿತ್ತು.
ಆಗಲೂ ಶ್ರೀನಿವಾಸರಾಜು ಮೇಷ್ಟರು ಮಗುವಿನ ಹಾಗೆ ನಗುತ್ತಿದ್ದರು.
ಈಗಲೂ ನಗುತ್ತಿರುತ್ತಾರೆ.
ಅವರ ಮನೆಯೆದುರಿನ ಮಲ್ಲಿಗೆ ಬಳ್ಳಿ
ಕಾಮದೇನುವಿನ ಪರಿಮಳ!
ಬೆಂಗಳೂರಿನ ಬಸ್ಸು ಹತ್ತಿಕ್ರೈಸ್ಟ್ ಕಾಲೇಜಿನಿಂದ ಕವಿತೆಗೆ ಬಹುಮಾನ ಇಸಕೊಂಡು ಬರುವುದಿದೆಯಲ್ಲ
ಮೇಷ್ಟ್ರೆ ನೀವಿದ್ದರೆ ಹುಡುಗರಿಗೆ ಹೀಗೆಲ್ಲ ಕಾವ್ಯದ ಹಾಗೆ
ಗಿರಕಿ ಹೊಡೆಯಲು ಆಗುತ್ತದೆ.ನಿಮಗೆ ನಮಸ್ಕಾರ.
ಕುಂವೀಯವರಿಗೆ ಪ್ರಶಸ್ತಿಯ ಗರಿ ಮೊಗಳ್ಳಿಯವರಿಗೆ ತಕರಾರೇ ಗುರಿ
Thursday December 27, 2007
ನಾವೆಲ್ಲ ಇಷ್ಟ ಪಡುವ ಕುಂವೀಯವರ ‘ಅರಮನೆ’ಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಬಂದಿದೆ.ಅಷ್ಟು ಹೊತ್ತಿಗೆ ಸರಿಯಾಗಿ ಮೊಗಳ್ಳಿಯವರ ತಕರಾರೂ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.ಕುಂವೀಯವರಿಗೆ ಅಭಿನಂದನೆ ಹೇಳುವ ಅಂದರೆ ಅವರ ಮೊಬೈಲ್ ಆಫ್ ಆಗಿದೆ.ಗಣೇಶ್ ಗೆ ಬೈಯ್ಯುವಾ ಅಂದರೆ ಅವರು ಇನ್ನೂ ತಕರಾರಿನ ಹ್ಯಾಂಗ್ ಓವರ್ ನಲ್ಲೇ ಇರುವ ಹಾಗಿದೆ. ಈವತ್ತು ಅಪರಾಹ್ನ ಗಣೇಶ್ ಜೊತೆ ನಡೆದ ಮೊಬೈಲ್ ಮಾತುಕತೆ ಇಲ್ಲಿದೆ.
ನಿಮಗೇನನ್ನಿಸುತ್ತದೆ? ನನ್ನದೂ ಒಂದು ವ್ಯರ್ಥ ಕಾಲಹರಣವೇ!!!!
ಒಬ್ಬ ಐರಿಷ್ ಹುಡುಗನ ಅಲೆದಾಟ
Thursday December 27, 2007

ಕತೆಯ ಆಶೆಯನ್ನು ಬಿಟ್ಟು ಮತ್ತೆ ಸುಮ್ಮನೇ ತಿರುಗಾಟ ಶುರು ಮಾಡಿದ್ದೆ. ಏನು ಬರೆಯಲು ಹೊರಟರೂ ಮತ್ತೆ ಅದೇ ಬಾಲ್ಯಾಕಾಲದ ಹಾವಳಿ ಜಾಸ್ತಿಯಾಗಿ. ಹಳೆಯದ್ದನ್ನೆಲ್ಲ ಮೂಟೆಕಟ್ಟಿ ಅಟ್ಟದಲ್ಲಿಟ್ಟು ಇಲ್ಲಿಗೆ ಬಂದರೂ ಬಾಲ್ಯದ ಕಾಟ ಕಡಿಮೆಯಾಗಲಿಲ್ಲವಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದೆ. ಊರಲ್ಲಿರುವ ಮಡದಿ ಕಾಗದ ಬರೆದು `ನೀನು ಗೊತ್ತೇ ಇಲ್ಲದ ಅಪರಿಚಿತ ಅಂತ ಅನ್ನಿಸುತ್ತಿದೆ. ನೀನು ಬೇರೆ ಯಾರೋ ಗಂಡಸು ಅಂತ ಅನ್ನಿಸಿ ಹೆದರಿಕೆಯಾಗುತ್ತಿದೆ. ನಿಜಕ್ಕೂ ನೀನು ಯಾರೂ ? ನನಗೆ ಯಾಕೋ ನೀನು ಎಲ್ಲೋ ಇರುವ ಬೇರೆ ಯಾರೋ ಮನುಷ್ಯ ಅಂತ ಅಳುಬರುತ್ತಿದೆ’ ಅಂತೆಲ್ಲಾ ಬರೆದಿದ್ದಳು. ಅವಳಿಗೆ ಸಮಾಧಾನ ಮಾಡಲು ಹೋಗದೆ ನಾನೂ ದುಷ್ಟನಂತೆ ಉತ್ತರ ಬರೆದಿದ್ದೆ. ಆಮೇಲೆ ನನ್ನೊಳಗೇ ಸಂಕಟಪಟ್ಟಿದ್ದೆ. ಹೆಂಡತಿಯೊಬ್ಬಳ ಹೆದರಿಕೆಗಳು, ಗಂಡನಾದವನ ದಿಕ್ಕು ದೆಸೆಯಿಲ್ಲದ ತಿರುಗಾಟ… ಇದರ ನಡುವೆಯೇ ಕಳೆದು ಹೋಗುತ್ತಿರುವ ಕಾಲ. ನಾವು ಇದನ್ನೆಲ್ಲ ಮರೆತು ಮಕ್ಕಳ ಹಾಗೆ ಮತ್ತೆ ಕೂಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೆ.
ಷಿಲ್ಲಾಂಗಿನಲ್ಲಿ ಈಗ ಚಳಿಯ, ಬೆಳದಿಂಗಳಿನ ಸಮಯ. ಎಲ್ಲರೂ ಬೆಚ್ಚಿನ ಬಟ್ಟೆಗಳನ್ನು ಹಾಕಿಕೊಂಡು ಬೇರೆಯದೇ ತರಹ ಕಾಣಿಸುತ್ತಿದ್ದಾರೆ. ಚಿರಾಪುಂಜಿಯ ಕಿತ್ತಳೆಯ ಹಣ್ಣು ಮಾರುಕಟ್ಟೆಗೆ ಬಂದಿದೆ. ಎಲ್ಲರೂ ಮನೆಗಳನ್ನು ತೊಳೆದು ಸಿಂಗರಿಸಲು ತೊಡಗಿದ್ದಾರೆ. ಎಲ್ಲರೂ ಕ್ರಿಸ್‌ಮಸ್ ಹಬ್ಬಕ್ಕಾಗಿ ಕಾಯುತ್ತಿದ್ದಾರೆ
ಈ ನಡುವೆ ಓವನ್ ಓ’ ಸಲ್ಲಿವನ್ ಎಂಬ ಅಯರ್ಲೆಂಡ್‌ನ ಗೆಳೆಯ ಕಾಗದ ಬರೆದಿದ್ದಾನೆ. ಸೈಕಲ್ಲು ಹತ್ತಿ ವಿಶ್ವವನ್ನೆಲ್ಲ ಸುತ್ತುತ್ತಿರುವ ಈತ ಈಗ ಯೂರೋಪಿನ ಗಡಿಯಲ್ಲಿರುವ ಟರ್ಕಿ ಗೆ ತಲುಪಿ ಅಲ್ಲಿಂದ ಕಾಗದ ಕಳಿಸಿದ್ದಾನೆ. ಕ್ರಿಸ್‌ಮಸ್ ಹಬ್ಬಕ್ಕೆ ಸರಿಯಾಗಿ ಆತ ಅಟ್ಲಾಂಟಿಕ್ ಕಡಲ ತೀರದಲ್ಲಿರುವ ತನ್ನ ಹಳ್ಳಿಯಲ್ಲಿ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತಾನೆ. ಈಗ ನಾನು ಯೂರೋಪಿನ ಹೊಸ್ತಿಲಲ್ಲಿ ನಿಂತಿದ್ದೇನೆ ಎಂದು ಆತ ಬರೆದಿದ್ದಾನೆ. ಇಂಗ್ಲಿಷಿನಲ್ಲಿ ಈತನ ಹೆಸರು ಓವೆನ್ ಆಂತ. ಐರಿಷ್ ಭಾಷೆಯಲ್ಲಿ ಅದನ್ನು ಓಐನ್ ಅಂತ ಬರೆಯುತ್ತಾರಂತೆ.
ಈತನನ್ನು ನಾನು ನೋಡಿದ್ದು ಒಂದು ತಮಾಷೆಯ ಸಂದರ್ಭ. ಒಂದು ವರ್ಷದ ಹಿಂದೆ ಶಿಲ್ಲಾಂಗಿನ ಅಸ್ಸಾಮಿ ಹೆಂಗಸೊಬ್ಬಳ ಮುರುಕು ಹೋಟೆಲಲ್ಲಿ ಕುಳಿತುಕೊಂಡು ಈತ ಹಾಲಿಲ್ಲದ ಟೀ ಕುಡಿದುಕೊಂಡು ಸಿಗರೇಟು ಸೇದಿಕೊಂಡು ಹೊರಗೆ ನೋಡುತ್ತಿದ್ದ. ಆಗ ಬೆಳ್ಳಗಿನ ಹೂ ಬಿಡುವ ಪ್ಲಂ ಮರಗಳು ಎಲ್ಲ ಕಡೆ ಅರಳಿಕೊಂಡು ನಿಂತಿದ್ದವು. ನಾನೂ ಟೀ ಕುಡಿದುಕೊಂಡು ಈತನನ್ನೇ ಗಮನಿಸುತ್ತಿದ್ದೆ. ಬೆಳ್ಳಗ್ಗೆ ಎತ್ತರಕ್ಕೆ ಲಕ್ಷಣವಾಗಿ ಇದ್ದ. ಜೊತೆಗೆ ವಿಲಕ್ಷಣವಾಗಿ ಮೂಗಿಗೊಂದು ನತ್ತು ಸಿಕ್ಕಿಸಿಕೊಂಡಿದ್ದ. ನನಗೆ ಅದನ್ನು ನೋಡಿ ನಗುಬರುತ್ತಿತ್ತು. ಅಸ್ಸಾಮಿ ಹೆಂಗಸು ಹೋಟೆಲ್ಲಿನ ಗೋಡೆಯಲ್ಲಿ ಜಡೆಸ್ವಾಮಿಯೊಬ್ಬನ ಫೋಟೋ ತೂಗುಹಾಕಿ ಅದಕ್ಕೆ ಊದು ಬತ್ತಿ ಹಚ್ಚಿ ಇಟ್ಟಿದ್ದಳು. ಈತ ಎದ್ದು ನನ್ನ ಬಳಿ ಬಂದು ಆ ಫೋಟೋ ತೋರಿಸಿ ಇದು ಯಾವ ದೇವರು ಅಂತ ಕೇಳಿದ. ನನಗೂ ಗೊತ್ತಿರಲಿಲ್ಲ. `ಕ್ಷಮಿಸುಗೊತ್ತಿಲ್ಲ’ ಅಂತ ಹೇಳಿದೆ. ಆಮೇಲೆ ನಾವು ಗೆಳೆಯರಾದೆವು. ನಮ್ಮ ಮನೆಗೆ ಬಂದು ಊಟ ಮಾಡಿ ಕುಡಿದು ಊರಿನಿಂದ ಬಂದ ನೆಂಟನಂತೆ ಕ್ಷೇಮ ಸಮಾಚಾರ ಮಾತಾಡಿಕೊಂಡು ಹತ್ತಿರವಾದೆವು. ಹೋಗಲಿ ಬಿಡು ಮೂಗಿಗೆ ನತ್ತು ಯಾಕೆ ಹಾಕಿಕೊಂಡಿದ್ದೀಯಾ ಅಂತ ಕೇಳಿದೆ. ಎಲ್ಲರೂ ಕುತೂಹಲ ಪಡಲಿ, ಮಕ್ಕಳು ನಗಾಡಲಿ ಅಂತ ಹಾಕಿರುವೆ’ ಅಂತ ಹೇಳಿದ.
ಈತ ಹುಟ್ಟಿದ್ದು ಐರ್ಲೆಂಡಿನಲ್ಲಿ ನಲ್ಲಿ. ಕೆಲಸ ಮಾಡುವುದು ಆಸ್ಟ್ರೇಲಿಯಾದಲ್ಲಿ. ಒಂದು ವರ್ಷ ಕೆಲಸ ಮಾಡಿ ಖರ್ಚು ಮಾಡದೆ ಹಣ ಉಳಿಸಿ ಇನ್ನೊಂದು ವರ್ಷ ರಜೆ ಹಾಕಿ ಲೋಕ ಸುತ್ತುತ್ತಾನೆ. ಆಸ್ಟ್ರೇಲಿಯಾದಿಂದ ಹಾಂಕಾಂಗ್‌ಗೆ ಹೋಗಿ, ಅಲ್ಲಿಂದ ಬಿಹಾರ ಸುತ್ತಿ, ಕಲಕತ್ತಾಗೆ ಬಂದು ಅಲ್ಲಿಂದ ಬಾಂಗ್ಲಾದೇಶದೊಳಕ್ಕೆ ನುಸುಳಿ ತ್ರಿಪುರಾದ ಗಡಿಯಲ್ಲಿ ಪುನಃ ಭಾರತದೊಳಕ್ಕೆ ಬಂದು ಬಸ್ಸು ಹತ್ತಿ ಶಿಲ್ಲಾಂಗಿಗೆ ಬಂದಿದ್ದ. ಈ ಊರಲ್ಲಿ ಐರಿಷ್ ಪಾದ್ರಿಗಳ ತುಂಬಾ ಗೋರಿಗಳಿವೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದ. ನಮ್ಮ ಜೊತೆ ಎರಡು ದಿನ ಪ್ರೀತಿಯಿಂದ ಇದ್ದು ಆಮೇಲೆ ಪುನಃ ನೇಪಾಳಕ್ಕೆ ಹೊರಟು ಹೋದ. ನೇಪಾಳದಿಂದ ಕಾಗದ ಬರೆದಿದ್ದ. ಅಲ್ಲಿ ಒಂದು ಹಳೆಯ ಸೈಕಲ್ಲು ಕೊಂಡು ಅದನ್ನು ಹತ್ತಿ ಭಾರತ ದಾಟಿ ಪಾಕಿಸ್ತಾನ, ಕಾಬೂಲ್, ಇರಾನ್‌ಗಳನ್ನು ಹಾದು ಈಗ ಟರ್ಕಿಯ ಬಳಿಯಿಂದ ಇನ್ನೊಂದು ಕಾಗದ ಬರೆದಿದ್ದಾನೆ.
`ಯಾಕೆ ಮಾರಾಯ ಇಷ್ಟೊಂದು ಸುತ್ತುತ್ತೀಯಾ?’ ಅಂತ ಕೇಳಿದ್ದೆ. ಸುಮ್ಮನೇ ಕಣ್ಣು ಮಿಟುಕಿಸಿದ್ದ. ನೋಡಿದರೆ ಆತನಿಗೆ ನನಗಿಂತ ಸಣ್ಣ ವಯಸ್ಸು. ಮದುವೆಯಾದ ಮೇಲೆ ಸುತ್ತುವುದನ್ನ ನಿಲ್ಲಿಸುತ್ತೇನೆ ಅಂತ ನನ್ನ ಮಡದಿಯನ್ನು ನೋಡಿ ಚೇಷ್ಟೆ ಮಾಡಿದ್ದ. ನಿಮ್ಮ ದೇಶದ ಕವಿ ಏಟ್ಸ್ ಗೊತ್ತಾ ಅಂತ ಕೇಳಿದ್ದೆ. ಗೊತ್ತು ಓದಿಲ್ಲ ಅಂತ ಹೇಳಿದ್ದ. ನನಗೆ ಕವನ ಬರೆಯುವುದು ಹೇಗೆ ಅಂತ ಹೇಳಿಕೊಡು ಅಂತ ಕೇಳಿದ್ದೆ. ತಮಾಷೆ ಮಾಡಬೇಡ ಅಂತ ಹೇಳಿದ್ದೆ. ನಾನು ನನ್ನ ಹೆಂಡತಿ ಇಬ್ಬರೂ ಸೇರಿ ನಾವು ಪ್ರೇಮಿಸಿದ್ದು ಮದುವೆಯಾಗಿದ್ದು ಎಲ್ಲವನ್ನೂ ಆತನಿಗೆ ಕತೆ ಹೇಳುವ ಹಾಗೆ ಹೇಳಿದ್ದೆವು. `ನನಗೆ ಆತ ತುಂಬಾ ಇಷ್ಟ ಆದ. ಸ್ಮಾರ್ಟ್ ಇದ್ದಾನೆ’ಅಂತ ಆಕೆ ನನ್ನ ಕಿವಿಯಲ್ಲಿ ಹೇಳಿದ್ದರು. ಅದನ್ನು ನಾನು ಅವನಿಗೆ ಹೇಳಿ ಅವನು ಕೆಂಪಗಾಗಿ ಬಿಟ್ಟಿದ್ದ.
ನಾವೆಲ್ಲಾ ಹೀಗೆಲ್ಲಾ ಸುತ್ತುವುದು ಯಾವಾಗ ? ನನ್ನ ಗೆಳೆಯನೊಬ್ಬ ಮೊನ್ನೆ ಬಾಬಾ ಬುಡನ್‌ಗಿರಿಗೆ ಹೋಗಬೇಕಿದ್ದವನು ಅಯ್ಯೋ ಅಲ್ಲಿ ಚಳಿ ಅಂತ ಹೋಗದೆ ಮಂಗಳೂರಿನಲ್ಲಿ ಮನೆಯಲ್ಲೇ ಉಳಿದುಬಿಟ್ಟಿದ್ದ.
ಯಾಕೋ ಈ ಸಲ ತುಂಬಾ ಜಾಸ್ತಿಯೇ ಬರೆದೆ. ನಿಲ್ಲಿಸುವೆ.
ತಮ್ಮನಿಗೆ ಚೈನಾದಲ್ಲಿ ನಿನ್ನೆ ದೊಡ್ಡ ಪೆರುನಾಳ್
Friday December 21, 2007
ನನಗಿಂತ ಬುದ್ಧಿವಂತನೂ, ಸಾಮರ್ಥ್ಯವುಳ್ಳವನೂ ಹಾಗೂ ಭಾವುಕನೂ ಆಗಿರುವ ನನ್ನ ಎರಡನೆಯ ತಮ್ಮ ಚೀನಾ ದೇಶದ ಯಾವುದೋ ಪ್ರಾಂತ್ಯದ ಯಾವುದೋ ನಗರಿಯಲ್ಲಿ ಏನೋ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ. ಅವನಿರುವ ನಗರದಲ್ಲಿ ನಿನ್ನೆ ಹಬ್ಬವಂತೆ.ತನ್ನ ಮೊಬೈಲ್ ಫೋನಿಂದ ತೆಗೆದ ಬಕ್ರೀದ್ ಪ್ರಾರ್ಥನೆಯ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾನೆ.’ಇಲ್ಲಿ ಸ್ತ್ರೀಯರೂ ಮಸೀದಿಯಲ್ಲಿ ನಮಾಝಿಗೆ ಬರುತ್ತಾರೆ’ ಎಂದು ಬರೆದಿದ್ದಾನೆ.ಅವನಿಗೂ ನನ್ನ ಹಾಗೆ ಹಜ್ ಹಬ್ಬ ಅಂದರೆ ಹೊಟ್ಟೆ ತುಂಬಾ ನೆನಪುಗಳು! ಕೆಳಗಿರುವುದು ಅವನು ಕಳಿಸಿದ ಚಿತ್ರಗಳು.



ಈವತ್ತು ಊರಲ್ಲಿ ದೊಡ್ಡ ಪೆರುನಾಳ್
Thursday December 20, 2007
ಈವತ್ತು ಊರಲ್ಲಿ ದೊಡ್ಡ ಪೆರುನಾಳ್ ಅಂದರೆ ಬಕ್ರೀದ್. ಅಮ್ಮ ಕರೆದಿದ್ದಾರೆ. ಎಂದಿನಂತೆ ಹೋಗಲಾಗದೆ ಕೂತಿದ್ದೇನೆ.ನನಗೆ ಯಾವಾಗಲೂ ಹೀಗೆಯೇ .ಅಲ್ಲಿ ಹೋಗಲಾರೆ.ಇಲ್ಲಿ ಇರಲಾರೆ. ಕವಿತೆ ಬೇಕಾದರೆ ಬರೆಯಬಲ್ಲೆ! ಸುಮಾರು ೨೨ ವರ್ಷಗಳ ಹಿಂದೆ ಹಬ್ಬಕ್ಕೆ ಹೋಗದೆ ಕಳ್ಳ ಕೆಲಸಗಳ ನಡುವೆ ಬರೆದ ಕವಿತೆಯನ್ನು ಇಲ್ಲಿ ಪೋಸ್ಟ್ ಮಾಡುತ್ತಿರುವೆ.
ಹಜ್‌ಹಬ್ಬದ ನೆನಪು….
ಸಣ್ಣಗೊಮ್ಮೆ ಹಿಡಿದ ಜಡಿ ಜರ್ರೋಮಳೆ
ಬಾಳೆಯೆಲೆ ಮೇಲೆ ಹಜ್ಜಿಯಬ್ಬದ ಹನಿ
ಬತ್ತಲು ಬಚ್ಚಲ ಮಾಡಿನಿಂದಿಳಿದ ಮೋಡ ಬಿಸಿಲುಕೋಲು
ಹಬೆದುಂಬಿ ಮೈಮಿರುಗಿ ಹಜ್ಜಿಯಬ್ಬದ
ನೀರು ಸೋಕುವಲ್ಲೆಲ್ಲ ಉಮ್ಮಗುನುಗುನಿಸಿ
ಪೆರುನಾಳಿನ ಹಾಡು.
ಬೆನ್ನೊರಸಿ ಉಡಿದಾರಕ್ಕೆ
ಮುಂಡುಡಿಸಿ, ಕಿವಿ ಎಳೆದು ಬೈತಲೆಯಲ್ಲಿ
ಬೆರಳಿರಿಸಿ ಪಾವಲಿ ಉಡಿತುಂಬಿ,
ಅತ್ತರು ಪೂಸಿ ಕಿವಿಯಲ್ಲಿ ಊದಿ, ದಾರಂದದ
ಮುಂದೆ ತಂಗಿ ‘ಅಲೀಮಾ’ ಚಾಚಿ ಕೈಚಾಚಿ
ಕೈಯೆಲ್ಲ ಮದರಂಗಿ ಕೆಂಪು ಹಕ್ಕಿ, ಕಿವಿಯೆಲ್ಲ ಬೆಳ್ಳಿ
ಎಸಳೆಲ್ಲ ಝಮಕಿ,ಅಂಗಳದ ಹಸಿಮಣ್ಣ ಮೇಲೆ ಧುಮುಕಿ.
ಬಿಳಿ ಮಲ್ಲಿಗೆಯ ಮಾಲೆ ಮುಡಿಯ ಮೇಲೆ.
ಹುಡುಗ ಕಾಡೊಳಗೆ ಅಲ್ಲಾಕರೆದಂತೆ ಪಳ್ಳಿಗೆ
ಬಾಪಾನ ಹಿಂದೆ, ‘ಅಲ್ಲಾಹು ಅಕ್‌ಬರ್’
ಕಾಡೊಳಗೆ ಕರೆದಂತೆ, ಹನಿಯೊಳಗೆ ಕರೆದಂತೆ
ಕಾಡಿನೊಳಗಡೆ ಕರೆದಂತೆ ಮಗನ ಅಲ್ಲಾನ ಕಡೆಗೆ
ಅಲ್ಲಿ ಮರಳು ಗಾಡಿನ ‘ಕಹಬಾ’ದ
ಅತ್ತಕಡೆ ಇಬ್ರಾಹಿಂ ನೆಬಿ ಮಗ ಇಸ್‌ಮಾಯೀಲನ
ಕೊರಳ ಅಲ್ಲಾಹನಿಗೆ ಕೋಯ್ದು ಕೊಡುವಂತೆ,
ದಿಕರಿಡುತ್ತವೆ ಕಿವಿಯ ಒಳಗೆ ಕಾಡನಡುವೆ.
ಉಮ್ಮನ ಪಾವಲಿ ಮುಂಡುಡಿಯಲ್ಲಿ ಕಣ್ಣ ತಬ್ಬುತ್ತದೆ.
ಕರಿದ ನೇಂದ್ರ ಕಾಯಿ ನಾಲಗೆಯಪ್ಪುತ್ತದೆ
ಸುಯ್ಯೋಹನಿಯಲ್ಲಿ ಕಿವಿದುಂಬುತ್ತದೆ, ಮರದ ಹನಿಕಣ್ಣು
ತಂಗಿಯ ಕಿವಿಯ ಬೆಳ್ಳಿ ತೊಟ್ಟಿಕ್ಕುತ್ತದೆ. ಬಾಪಾನ ಹಿಂದೆ
ಅಲ್ಲಾನ ಕಡೆಗೆ.
ಇರುವುದೊಂದೇ ಬಾಪಾ, ಹಿಂಬಾಲಿಸಲಿಕ್ಕಿರುವುದೊಂದೇ ಬಾಪಾ
ಈ ಇಷ್ಟು ಮಳೆಯ ಕಾಡಿನಲ್ಲಿ ಹನಿವ ಹನಿಯೆಲ್ಲ
ಬಾಪಾ ಕರೆದಂತೆ, ನೆಲವೆಲ್ಲ ಪಸೆಯಿಡಿದು ಜಾರುಜಾರಿಗೆ
ದೂರ ಸರಿದಂತೆ ಬಾಪಾ ಕಾಲುರೋಡಿನೊಳಗೆ
ಅಲ್ಲಾನ ಕಡೆಗೆ.
ಹರಿದ ತೊರೆ ಅಡಿಕೆ ಪಾಲದ ಮೇಲೆ ಬಾಪಾ
ನಡೆದಂತೆ ನಡುಗುತ್ತಾ ಹುಡುಗ,
ನಡುಗುತ್ತ ಅಡಿಗಡಿಗೆ ಅಲ್ಲಾನ ಕರೆಯುತ್ತ ಹುಡುಗ.
ಕಣ್ಣ ಅಗಲಕ್ಕೆಲ್ಲ ಅಲ್ಲಾ, ನದಿ ಹರಿದಂತೆ ಕೆಳಗೆ
ಅಲ್ಲಾ, ಆಕಾಶವೆಲ್ಲ ಕರಿದುಂಬಿ ಹರಿದಂತೆ
ಅಲ್ಲಾ, ಮರದಮರದ ತೊಗಟಿ ಕರಿಗಟ್ಟಿ ಬೇರು
ಪೊದೆಯೆಲ್ಲ ನೀರು ಮುಂಡು ತೊಯ್ಸಿಸಿಕೊಂಡು
ನಡೆವ ಹುಡುಗನೆದೆಯಲ್ಲೆಲ್ಲ ಅಲ್ಲಾನ ಕಡೆಗೆ ನಡೆವ ಬಾಪಾ.
ಹರಿವ ತೊರೆದಾಟಿ ಮುಳಿ ಹುಲ್ಲ ನೆಲದಲ್ಲಿ
ಕಾಲೊಸರುವಲ್ಲೆಲ್ಲಾ ಅಕ್ಕಿ ಹಿಟ್ಟಿನ ಮೇಲೆ
ನಾದಿದಂತೆ ಅಲ್ಲಾನ ಹೆಜ್ಜೆ.
ಪಳ್ಳಿಯ ಪಡಿಯೇರಿದ
ಮೇಲೆ ಬಾಪಾ ಅಲ್ಲಾನ ಮುಂದೆ ‘ಅಲ್ಲಾಹು ಅಕ್‌ಬರ್’
ಹುಡುಗ ನುಡಿ ತುಂಬಿ ಹರಿವ ಪಾವಲಿಯಲ್ಲೆಲ್ಲ
ಉಮ್ಮ ಅಳುವಂತೆ ಪಳಿಯಿಂದೆಲ್ಲಿಂದಲೋ ಅಲ್ಲಾ
ಕರೆದಂತೆ ‘ಕಹಬಾ’ದ ಕಡೆಗೆ, ಕಾಡಿನಲ್ಲೆಲ್ಲೋ
ಬಾಪಾ ಪುಟ್ಟ ಹುಡುಗನ ಬಿಟ್ಟು ನಡೆದಂತೆ ಎಲ್ಲೋ
‘ಅಲ್ಲಾಹು ಅಕ್‌ಬರ್’.
ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ
Saturday December 15, 2007
ಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.
ನಿನ್ನೆ ಮೊನ್ನೆಯೆಲ್ಲಾ ಇಲ್ಲಿ ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್ ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.
ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ.
ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು
Sunday December 9, 2007

-೧-
ನೀರೊಳಗೆ ತಿರುಗುತ್ತಿದೆ ನೀರ ಗಾಲಿ,
ತಾರೆ ತಿರುಗುತ್ತಿದೆ ಚಂದ್ರನೊಡನೆ.
ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ
ಇಷ್ಟೊಂದು ಬೆಳಕು ಇಲ್ಲಿ !
ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ
Wednesday November 28, 2007
ನನ್ನ ತೀರಾ ಹತ್ತಿರದ ಗೆಳೆಯನ ತಂದೆ ಇಂದು ಮುಂಜಾನೆ ತೀರಿ ಹೋದರು.ಒಂದು ವಾರದ ಹಿಂದೆ ನನ್ನ ಮಾವ ತೀರಿ ಹೋದರು.ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಇಬ್ಬರೂ ಅವರವರ ರೀತಿಯಲ್ಲಿ ಬೆರಗು ಹುಟ್ಟಿಸುವಷ್ಟು ಸಮರ್ಥರಾಗಿದ್ದರುಎರಡು ಮೂರು ದಿನಗಳ ಹಿಂದೆ ನನ್ನ ಗೆಳೆಯ Dylan Thomas ಬರೆದ ಈ ಕವಿತೆಯನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದ. ಅದನ್ನು ಈಗ ಕೂತು ಕನ್ನಡಕ್ಕೆ ಅನುವಾದಿಸಿರುವೆ. ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ
ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು
Monday November 26, 2007
ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾವುದೋ ಒಂದು ದೇಶ, ಯಾವುದೋ ಒಂದು ಕಾಲ ಕಣ್ಣ ಮುಂದೆ ಕಾಣುತ್ತದೆ. ಕಣ್ಣು ಮುಚ್ಚಿದರೆ ಮುಚ್ಚಿದ ಕಣ್ಣೊಳಗೆ ಹಸಿರು ತೇಪೆಗಳು ಸರಿದಾಡುತ್ತವೆ. ಮೀನುಗಾರರ ದೋಣಿಗಳು ಮತ್ತು ಕಡಲ ಹಕ್ಕಿಗಳು ಅಲೆದಾಡುತ್ತಿರುವ ಆತ್ಮಗಳಂತೆ ಓಡಾಡುತ್ತಿರುತ್ತವೆ.
ಇಲ್ಲಿ ಕೂತುಕೊಂಡು ಕನ್ನಡದ ಖ್ಯಾತ ವಿಮರ್ಶಕರಾದ ಪ್ರೊಫೆಸರ್ ಕಿ.ರಂ.ನಾಗರಾಜ್ ಪುಟ್ಟ ಬಾಲಕನಂತೆ ಮಳೆಗಾಲದಲ್ಲಿ ಈ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು. ನಾನು ಮಹಾ ಮಳೆಗಾಲದಲ್ಲಿ ಕಡಲನ್ನು ನೋಡಿದವನಂತೆ ಭೂಮಿ ಆಕಾಶ ಕಡಲು ಎಲ್ಲಾ ಒಂದೇ ಆಗಿಬಿಟ್ಟಿರುತ್ತದೆ. ಎಲ್ಲವೂ ಮಂಜು ಮುಸುಕಿದಂತೆ… ಎಂದು ಹೇಳುತ್ತಿದ್ದೆ.
ಆ ಮೇಲೆ ಈ ಜಾಗಕ್ಕೆ ಬೆಳದಿಂಗಳ ರಾತ್ರಿಯಲ್ಲಿ ಬರಬೇಕು ಎಂದು ವಿಷಯ ಬದಲಿಸಿದೆ.
ತಿರುಗಿ ಬರುವಾಗ ಅವರಿಗೆ ಒಂದು ಮುಳುಗಿದ ಹಡಗನ್ನು ತೋರಿಸಿದೆ ಮತ್ತು ಮಹಮ್ಮದ್ ಆಲಿ ಎಂಬ ಸಾಹಸಿ ಈಜುಗಾರನ ಕತೆ ಹೇಳಿದೆ. ಈ ಮುಳುಗಿದ ಹಡಗು ಅಲ್ಲಿ ಮುಳುಗಿ ಆಗಲೇ ಆರೇಳು ವರ್ಷಗಳಾಗಿತ್ತು. ಇಲ್ಲಿ ಮುಳುಗುವ ಮೊದಲು ಇದು ಹಾಂಕಾಗಿನ ಒಬ್ಬ ಚೀನೀ ವರ್ತಕನಿಗೆ ಸೇರಿತ್ತು. ಅದು ಎಲ್ಲೋ ಸಾಗರದ ನಡುವಲ್ಲಿ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಹಾಳಾಗಿ ಅದನ್ನು ಒಡೆದು ತೂಕಕ್ಕೆ ಕಬ್ಬಿಣವನ್ನಾಗಿ ಮಾರಲು ಈ ಕಡಲ ತಡಿಗೆ ತಂದಿದ್ದರು. ದಡದ ಹತ್ತಿರ ಬಂದಂತೆ ಅದು ಕಡಲ ಕೊರೆತಕ್ಕೆ ಸಿಲುಕಿ ಮರಳಿನೊಳಗೆ ಹೂತು ಹೋಗಲು ತೊಡಗಿ ನಾನು ಅದನ್ನು ಕಿ.ರಂ ಗೆ ತೋರಿಸುವಾಗ ಅದರ ಚಾವಣಿ ಮಾತ್ರ ಕಾಣುತ್ತಿತ್ತು. Read the rest of this entry »
ಓ ಎಳೆಯ ಜೀವಗಳೆ .. ..
Sunday November 18, 2007
ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.
ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.
ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.
`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು. Read the rest of this entry »
‘ಪಾತು’ - ಒಂದು ಸಣ್ಣ ಕತೆ
Monday November 5, 2007

[ಚಿತ್ರ:ಚರಿತಾ]
ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು - ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…
ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.
ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.
ಶನ್ಯಾಶಿ ಸಿಕ್ಕಿದಳು
Monday October 29, 2007
ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರು
. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು ಆಕಾಶವನ್ನು ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.
ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.
ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.
ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.
ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.
ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.
ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.
ನೂರಾ ಐದು ವರ್ಷಗಳನ್ನು ಕಂಡು ತೀರಿಹೋದರು ರಾಮಣ್ಣ
Wednesday October 24, 2007

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.

ಅವರ ಕುರಿತು ಈ ಹಿಂದೆ ಬರೆದ ಬರಹಕ್ಕಾಗಿ ಇಲ್ಲಿ ಓದಿ
ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ
Monday October 22, 2007
ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.
ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.
ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.
ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ. Read the rest of this entry »
ಇನ್ನೊಂದು ಬಹಳ ಹಳೆಯ ಕವಿತೆ
Monday October 15, 2007
ಅವಳು

ಚಂದವಿದ್ದಳು ಗೆಳೆಯ ಅವಳು
ಒಳ್ಳೆ ಮಜಬೂತು ಕುದುರೆ.
ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು
ಬಿಟ್ಟಾಗ ನಗುವ ನಕ್ಷತ್ರ ಮೀನು.
ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ
ಕಚ್ಚಿ ಹೇರುಪಿನ್ನು, ನಗುವ ಹಾಗೆ
ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,
ತುಂಬು ಕೊರಳಿನ ತುಂಬ ಕಾಡು ಹಾಡು.
ಅವಳ ತಟ್ಟನೆಯ ತಿರುವು ತಿರುವುತ್ತ
ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ
ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ
ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ
ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.
ಸಿಂಗರ್ ಮತ್ತು ಫಾಹಿಯಾನ್ ಯಾನೆ ಗಂಡಸರ ಕಷ್ಟಗಳು!
Friday October 5, 2007

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.
ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. Read the rest of this entry »
ಪುಟ್ಟ ಮೂರು ರೂಮಿ ಕವಿತೆಗಳು
Saturday September 29, 2007
[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]